ಹಾದಿಗಲ್ಲು
ಶ್ರೀಕ್ಷೇತ್ರ ಪರಿಚಯ
ಹಾದಿಗಲ್ಲು ಶ್ರೀಕ್ಷೇತ್ರವು ಶ್ರೀರಾಮಾಯಣ ಕಾಲದ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಕುಮುದ್ವತಿ, ಶರ್ಮಣ್ವತಿ, ಶರ್ಮಣಾವತಿ, ಕುಶಾವತಿ ಹಾಗೂ ಶರಾವತಿ ಪಂಚನದಿಗಳ ಉಗಮಸ್ಥಾನಗಳ ಸಮೀಪದಲ್ಲಿರುವುದು ಇದರ ವಿಶೇಷತೆ. ಪರಶುರಾಮನು ಮಾತೃಹತ್ಯಾ ಪಾಪದಿಂದ ವಿಮುಕ್ತಿ ಪಡೆದ ತುಂಗಾನದಿಯ ಪರಶುರಾಮ ಕುಂಡಕ್ಕೂ ಈ ಕ್ಷೇತ್ರವು ಅತಿ ಸನಿಹದಲ್ಲಿದೆ.
ಸ್ಥಳಪುರಾಣದ ಪ್ರಕಾರ, ಶ್ರೀರಾಮನು ಮಾಯಾಮೃಗವನ್ನು ಬೆನ್ನಟ್ಟಿ ಬಂದು ಹೆದೆ ಏರಿಸಿದ ಸ್ಥಳವೂ ಇದೇ ಪ್ರದೇಶದಲ್ಲಿದೆ. ಆ ನೆನಪಿಗಾಗಿ ಇಲ್ಲಿ ಶ್ರೀರಾಮೇಶ್ವರನ ಪ್ರತಿಷ್ಠೆ ನಡೆದಿದೆ. ಪ್ರತಿಷ್ಠಾಪನೆಗಾಗಿ ಶಿವಲಿಂಗವನ್ನು ತರಲು ಆಂಜನೇಯನಿಗೆ ಕಳುಹಿಸಿದಾಗ ವಿಳಂಬವಾದ ಕಾರಣ ಮುಹೂರ್ತ ಮೀರುವುದೆಂದು ಸೀತಾಮಾತೆ ಮಣ್ಣಿನಿಂದ ವಿಶೇಷ ಶಿವಲಿಂಗವನ್ನು ನಿರ್ಮಿಸಿ ಪ್ರತಿಷ್ಠಾಪಿಸಿದರು. ನಂತರ ಆಂಜನೇಯ ತಂದ ಶಿವಲಿಂಗವನ್ನು ಪ್ರತಿಷ್ಠಾಪಿಸದಿರುವುದಕ್ಕೆ ಕೋಪಗೊಂಡು ಎಸೆದಾಗ ಅದು ಓರೆಯಾಗಿ ನಿಂತು ಕಲಾನಾಥೇಶ್ವರನಾಗಿ ಇಲ್ಲಿ ನೆಲೆಸಿದೆ.
ಈ ಹಳ್ಳಿಯಲ್ಲಿ ಪ್ರಾಣದೇವ ಆಂಜನೇಯನ ಕೋಪತಾಪ ಪರಿಹಾರವಾಗುವ ಕಾಲದಲ್ಲಿ ಭಾವಿಸಮೀರರೆಂದೇ ಖ್ಯಾತರಾದ ಶ್ರೀ ವಾದಿರಾಜರು ಆಗಮಿಸುತ್ತಾರೆ ಎಂಬ ಶ್ರೀರಾಮನ ವಾಕ್ಯ ಪ್ರಸಿದ್ಧವಾಗಿದೆ. ಆ ಪ್ರಕಾರವೇ ಶ್ರೀ ವಾದಿರಾಜ ಗುರುಸಾರ್ವಭೌಮರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ದಿವ್ಯ ಅನುಗ್ರಹವನ್ನು ನೀಡಿದರು.
ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕ ಮೂಲದ ಈ ಮನೆತನವು ಪೂರ್ವದಿಂದಲೂ ವೇದ, ಜ್ಯೋತಿಷ್ಯ, ಮಂತ್ರ, ತಂತ್ರ ಮುಂತಾದ ಶಾಸ್ತ್ರಗಳಲ್ಲಿ ಪರಿಣತರಾಗಿದ್ದು, ಮೊದಲಿನಿಂದ ಕುಂಭಾಸಿ ಮಠವೆಂದು ಪ್ರಸಿದ್ಧವಾಗಿದ್ದ ಹಾಗೂ ನಂತರ ಸೋದೆ ವಾದಿರಾಜ ಮಠವೆಂದು ಖ್ಯಾತಿಗೊಂಡ ಮಠದೊಂದಿಗೆ ಈ ಮನೆತನಕ್ಕೆ ದೀರ್ಘಕಾಲದ ಬಾಂಧವ್ಯವಿದೆ.
ಈ ಸಂಬಂಧದ ನೆಲೆಯಲ್ಲಿ ಶ್ರೀ ವಾದಿರಾಜರು ಆಚಾರ್ಯಮಧ್ವ ಕರಾರ್ಚಿತ ಅಪರೂಪದ ದಾಮೋದರ-ಕಾಳಿಂಗಮರ್ಧನ ಶ್ರೀಕೃಷ್ಣ ಪ್ರತಿಮೆ, ಶ್ರೀ ಅಭಯಲಕ್ಷ್ಮೀನೃಸಿಂಹ ಸಾಲಿಗ್ರಾಮ ಹಾಗೂ ತಾವೇ ಎರಕ ಹೊಯ್ಯಿಸಿ ಅಭಿಮಂತ್ರಿಸಿದ ರುದ್ರಪದ ತಪೋನಿರತ ಶ್ರೀ ನಾರಾಯಣ ಭೂತರಾಜರ ಪದ್ಮಪೀಠ ಯಂತ್ರವನ್ನು ನಡುವಿನಮನೆ ಸಂಸ್ಥಾನಕ್ಕೆ ಅನುಗ್ರಹಿಸಿದರು. ಅಂದಿನಿಂದ ಸೋದೆ ಮಠ ಸಂಪ್ರದಾಯದಂತೆ ಪೂಜಾ ಕೈಂಕರ್ಯ ನಡೆಯುತ್ತಿದೆ.
ನಂತರ ಸೋದೆ ಮಠದ ಯತಿಗಳ ಅನುಗ್ರಹದಿಂದ ಹಾಗೂ ಮಧ್ಯಂತರದಲ್ಲಿ ಹಲವು ಮಹನೀಯರ ಮಾರ್ಗದರ್ಶನದಿಂದ ಹಾದಿಗಲ್ಲು ಕ್ಷೇತ್ರವು ಭಕ್ತರ ಶ್ರದ್ಧಾ ಕೇಂದ್ರವಾಗಿ ರೂಪುಗೊಂಡಿತು. ವಿಶೇಷವಾಗಿ ಧರ್ಮದರ್ಶಿ ಶ್ರೀ ಹಾದಿಗಲ್ಲು ರಾಮಕೃಷ್ಣರಾಯರು, ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವೋತ್ತಮತೀರ್ಥರ ಆಶಯದಂತೆ ಸುಂದರ ದೇವಾಲಯವನ್ನು ನಿರ್ಮಿಸಿ ಕ್ಷೇತ್ರದ ವೈಭವವನ್ನು ಹೆಚ್ಚಿಸಿದರು. ಕ್ರಿ.ಶ. 1998ರಲ್ಲಿ ಶ್ರೀಗಳವರು ಭಗವತ್ಪ್ರತೀಕಗಳನ್ನು ಪ್ರತಿಷ್ಠಾಪಿಸಿ ಕ್ಷೇತ್ರದ ಸಾನ್ನಿಧ್ಯವನ್ನು ವರ್ಧಿಸಿದರು.
ಇಲ್ಲಿ ಭಾವಿಸಮೀರರೆಂದೇ ಖ್ಯಾತರಾದ ಶ್ರೀ ವಾದಿರಾಜ ಗುರುರಾಜರ ಮೃತ್ತಿಕಾ ವೃಂದಾವನವಿದ್ದು, ಪ್ರಾಣದೇವರು ಶ್ರೀರಾಮನಾಮ ಸ್ಮರಣೆಯಲ್ಲಿ ಕೈಮುಗಿದು ಕುಳಿತಿರುವ ರೂಪದೊಂದಿಗೆ ಹಾಗೂ ಶ್ರೀ ರಾಜರ ಉಪಾಸ್ಯ ದೇವರಾದ ಶ್ರೀ ಹಯಗ್ರೀವ ಬಿಂಬದೊಂದಿಗೆ ಪ್ರತಿಷ್ಠಿತವಾಗಿದೆ.
ಶ್ರೀ ವಾದಿರಾಜರು ಸ್ಥಾಪಿಸಿದ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ‘ಶ್ರೀ ವಾದಿರಾಜ ಸಂಸ್ಕೃತಿ ಸಂವರ್ಧನ ಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯ ಮೂಲಕ ಧರ್ಮ, ಸಂಸ್ಕೃತಿ ಹಾಗೂ ಸಾಹಿತ್ಯ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.
ಸಾಹಿತ್ಯ ಸಂಸ್ಕೃತಿ ಉತ್ಸವಗಳು, ಉಪನ್ಯಾಸ ಕಮ್ಮಟಗಳು, ಯಕ್ಷಗಾನ ಕಲಾಕೇಂದ್ರ, ಅನ್ನದಾನ, ಅಭಯದಾನ, ವಿದ್ಯಾದಾನ ಸೇರಿದಂತೆ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಮೂಲಕ ಸಂಸ್ಥೆ ಸಮಾಜೋಪಯೋಗಿಯಾಗಿ ಬೆಳೆಯುತ್ತಿದೆ.
ಭವಿಷ್ಯದಲ್ಲಿ ಅಧ್ಯಾತ್ಮ ಸಾಧನಾ ಕೇಂದ್ರ, ಆಧ್ಯಾತ್ಮಿಕ ಗ್ರಂಥಾಲಯ, ಸಂಶೋಧನ ಕೇಂದ್ರ, ಭಾರತೀಯ ಭಾಷಾ ಸಂಸ್ಕೃತಿ ಅಧ್ಯಯನ ಕೇಂದ್ರ, ಸಾವಯವ ಕೃಷಿ ಸಂವರ್ಧನ ಕೇಂದ್ರ, ಗೋಶಾಲೆ, ವೇದ-ವೇದಾಂಗ ಕೇಂದ್ರ, ಆರೋಗ್ಯ ಸಂವರ್ಧನ ಕೇಂದ್ರ ಹಾಗೂ ಗುರುಕುಲ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ.
Gallery Moments
Snapshots capturing devotion, heritage, and community spirit.
